ಮರುತ್ತ
	ಒಬ್ಬ ರಾಜ. ಸೂರ್ಯವಂಶದ ಅವಿಕ್ಷಿತನ ಮಗ. ಇವನಿಗೆ ಅವಿಕ್ಷತ ಎಂಬ ಹೆಸರೂ ಇದೆ. ಈತ ಹುಟ್ಟಿದಾಗ ತುಂಬುರು ಎಂಬ ಗಂಧರ್ವ ಬಂದು ಮರುತ್ತನ ತಾಯಿ ವಿಶಾಲಾದೇವಿಯ ಹತ್ತಿರ ನಿನ್ನ ಮಗ ಮರುತ್ತಗಳಂತೆ ಪರಾಕ್ರಮಿಯಾಗುವ ಎಂದು ಹೇಳಿದ. ಆದುದರಿಂದ ಈತನಿಗೆ 'ಮರುತ್ತ ಎಂದು ಹೆಸರಿಡಲಾಯಿತು. ಶೌರ್ಯ, ಪರಾಕ್ರಮ, ಸಂಪತ್ತುಗಳಲ್ಲಿ ಇಂದ್ರನಿಗಿಂತ ಬಲಿಷ್ಠ. ಒಮ್ಮೆ ಯಾಗ ಮಾಡಿದಾಗ ಋತ್ವಿಜ ಸ್ಥಾನಕ್ಕೆ ಬೃಹಸ್ಪತಿಯನ್ನು ಆಹ್ವಾನಿಸಿದ. ಆದರೆ ಮನುಷ್ಯರು ಮಾಡುವ ಯಜ್ಞಕ್ಕೆ ದೇವಗುರು ಹೋಗಬಾರದೆಂದು ಇಂದ್ರ ಬೃಹಸ್ಪತಿಗೆ ಅಡ್ಡಬಂದ. ನಾರದನ ಸೂಚನೆಯಂತೆ ಬೃಹಸ್ಪತಿಯ ತಮ್ಮ ಸಂವರ್ತನನ್ನು ಕರೆತಂದು ಯಜ್ಞಮಾಡತೊಡಗಿದಾಗ ಇಂದ್ರ ವಿಘ್ನಗಳನ್ನುಂಟು ಮಾಡಿದ. ಸಂವರ್ತನ ಮಂತ್ರಶಕ್ತಿಯ ಮುಂದೆ ಇಂದ್ರನ ಸಾಹಸ ನಿಲ್ಲಲಿಲ್ಲ. ಅಷ್ಟೇ ಅಲ್ಲ, ಇಂದ್ರಾದಿಗಳೇ ಪ್ರತ್ಯಕ್ಷವಾಗಿ ಬಂದು ಹವಿಸ್ಸನ್ನು ಸ್ವೀಕರಿಸಿದರು.; ಅದ್ದೂರಿಯಾಗಿ ನಡೆದ ಯಜ್ಞದಲ್ಲಿ ವಿಪ್ರಾದಿಗಳಿಗೆ ದಾನಮಾಡಿ ಉಳಿದ ಐಶ್ವರ್ಯವನ್ನೆಲ್ಲ ಹಿಮವತ್ಪ್ರಾಂತ್ಯದಲ್ಲಿ ಹೂತಿಟ್ಟ. ಮುಂದೆ ಧರ್ಮರಾಜ ಅಶ್ವಮೇಧಯಾಗ ಮಾಡುವಾಗ ವ್ಯಾಸ ಮಹರ್ಷಿಯ ಸೂಚನೆಯಂತೆ ಆ ದ್ರವ್ಯವನ್ನು ತಂದು ಬಳಸಿಕೊಂಡ. ಮರುತ್ತನಿಗೆ ನರಿಷ್ಯಂತ ಮುಂತಾದ ಹದಿನೆಂಟು ಮಂದಿ ಮಕ್ಕಳು. ಈ ವೃತ್ತಾಂತ ಭಾಗವಂತ, ರಾಮಾಯಣ, ಮಾರ್ಕಂಡೇಯ ಪುರಾಣಗಳಲ್ಲಿ ಬಂದಿದೆ.
(ಬಿ.ಎನ್.ಎನ್.ಬಿ.)